ಹವಾಮಾನ ಬದಲಾವಣೆ ಕುರಿತು ಶಿವಮೊಗ್ಗಾ ಜಿಲ್ಲೆಯಲ್ಲಿ ಆಗಬೇಕಾದ ಕಾರ್ಯಯೋಜನೆ

ಶಿವಮೊಗ್ಗಾ ಜಿಲ್ಲೆ ಅರಣ್ಯ ಜೀವವೈವಿಧ್ಯ ಸಂರಕ್ಷಣೆಗೆ ಬೇಕು ಜನಸಹಭಾಗಿತ್ವದ ಕ್ರಿಯಾಯೋಜನೆ

ಶಿವಮೊಗ್ಗಾ ಜಿಲ್ಲೆಯ ಅರಣ್ಯ ಪ್ರದೇಶಗಳು ಮಲೆನಾಡಿನ ಪ್ರದೇಶ ಎಂದು ಕರೆಸಿಕೊಳ್ಳುತ್ತವೆ. ಆರ್ಥಿಕವಾಗಿ ಮತ್ತು ಪರಿಸರ ಸೇವೆಗಳಿಗೆ ಈ ಅರಣ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರು ಪಡೆದ ಆಗುಂಬೆ (೮೨೭೬ಮಿ.ಮೀ.) ಇದೇ ವ್ಯಾಪ್ತಿಯಲ್ಲಿದೆ. ಶಿವಮೊಗ್ಗಾ ಜಿಲ್ಲೆಯಲ್ಲಿ ಎಲ್ಲ ರೀತಿಯ ಅರಣ್ಯ ಪ್ರದೇಶಗಳಿವೆ. ನಿತ್ಯ ಹರಿದ್ವರ್ಣ, ಕುರುಚಲು, ಭಾಗಶಃ ಹರಿದ್ವರ್ಣ, ಹಾಳಾಗುತ್ತಿರುವ ಅರಣ್ಯ ಹೀಗೆ ಹಲವು ಪರಿಸ್ಥಿತಿಯ ಅರಣ್ಯಗಳಿವೆ. ಒಟ್ಟೂ ಜಿಲ್ಲೆಯ ಭೂಭಾಗದ ೫೧% ಅರಣ್ಯ ಪ್ರದೇಶವಿದೆ. (೮೪೭೭ ಚ. ಕಿ.ಮೀ).

 • ಶಿವಮೊಗ್ಗಾ ಜಿಲ್ಲೆಯಲ್ಲಿ ೧೯೭೩ ರಲ್ಲಿ ೪೩% ಅರಣ್ಯವಿತ್ತು. ೨೦೧೨ರಲ್ಲಿ ೨೨.೩೩% ಅರಣ್ಯ ಮಾತ್ರ ಉಳಿದುಕೊಂಡಿದೆ. ಭದ್ರಾವತಿ ಅರಣ್ಯ ವಿಭಾಗದಲ್ಲಿ ಮಾನವ ಹಸ್ತಕ್ಷೇಪ ಅತಿ ಹೆಚ್ಚಿದೆ.
 • ಪಶ್ಚಿಮ ಘಟ್ಟದ ಅಳಿವಿನ ಅಂಚಿನ ಪ್ರಭೇದಗಳನ್ನು ಉಳಿಸಲು ಗಂಭೀರ ಕಾರ್ಯಕ್ರಮಗಳು, ಆದ್ಯತೆ ಬೇಕೆ ಬೇಕು. ಇನ್ನಷ್ಟು ಅರಣ್ಯಗಳು ಛಿದ್ರವಾಗುವುದನ್ನು ತಡೆಗಟ್ಟಬೇಕು.
 • ರೈತರ ವನವಾಸಿಗಳ ಸಹಭಾಗಿತ್ವ :ಅಪಾರ ಜಲಮೂಲಗಳಿರುವ ಈ ಅರಣ್ಯಗಳ ನಿರ್‍ವಹಣೆಯ ನೀತಿಗಳನ್ನು ಪುನರ್ ವಿಮರ್ಶೆ ಮಾಡಲೇಬೇಕು. ಯಾಕೆಂದರೆ ಇಲ್ಲಿನ ನದೀ ಕಣೆವೆಗಳು, ಹೊಳೆ ಹಳ್ಳಗಳು, ರಾಜ್ಯಕ್ಕೆ , ದಕ್ಷಿಣ ಭಾರತಕ್ಕೆ ಬಯಲು ನಾಡಿಗೆ ನೀರುಣಿಸುತ್ತವೆ. ಇಲ್ಲಿ ಅರಣ್ಯ ಹಳ್ಳ- ತೊರೆಗಳ ನಿರ್ವಹಣೆ ಮಾಡುವಲ್ಲಿ ಇಲ್ಲಿನ ವನವಾಸಿಗಳು, ಸ್ಥಾಕ ರೈತರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಾನಿಕರಿಗೆ ಕಾರ್ಬನ ಕ್ರೆಡಿಟ್ ಲಾಭ ಸಿಗುವಂತಾಗಬೇಕು.
 • ಅತ್ಯಂತ ಅಪರೂಪದ ಜೈವಿಕ ಸಂಪತ್ತು ಇರುವ ಪಶ್ಚಿಮಘಟ್ಟದ ಈ ಕಾಡುಗಳ ನಿರ್ವಹಣೆಗೆ ಸಮಗ್ರ ಪರಿಸರ ನಿರ್ವಹಣಾ ಯೋಜನೆಯ ಅವಶ್ಯಕತೆಯನ್ನು ಎತ್ತಿ ಹೇಳಲಾಗಿದೆ.
 • ನದಿಮೂಲ ಉಳಿಸಿ : ನಿರಂತರವಾಗಿ ಇಡೀ ವರ್ಷ ನೀರಿನ ಹರಿವು ಇರಲು ಹಾಗೂ ಅಪಾರ ಜೀವ ವೈವಿಧ್ಯ ಉಳಿಯಲು ಸರಿಯಾದ ನಿರ್‍ವಹಣಾ ಯೋಜನೆ ಬಂದರೆ ಮಾತ್ರ (ಈಗಾಗಲೇ ಬಹಳಷ್ಟು ಅರಣ್ಯ ನಾಶ ಆಗಿದೆ) ಉಳಿದಿರುವ ನಿತ್ಯಹರಿದ್ವರ್ಣ, ಭಾಗಶಃ ಹಸಿರು ಅರಣ್ಯ ರಕ್ಷಣೆ ಸಾಧ್ಯ.
 • ವರದಾ ಮತ್ತು ಶರಾವತಿ ಕಣಿವೆಗಳಲ್ಲಿ ಅರಣ್ಯ ಛಿದ್ರವಾಗಿ ಹಳ್ಳ, ತೊರೆಗಳ ನಾಶವಾಗಿದೆ. ಈ ನದಿಗಳ, ಉಪನದಿಗಳು, ಹೊಳೆಗಳ ಜಲಾನಯನ ರಕ್ಷಣೆ, ನದೀ ಪಾತ್ರದ ಸಸ್ಯ ವೈವಿಧ್ಯ ಉಳಿಸಲು ಜರೂರು ಕ್ರಮಬೇಕು.
 • ರಾಂಪತ್ರೆ ಜಡ್ಡಿಗಳು, ಕತ್ತಲೆ ಕಾನ್ಸಿಸ್ ನಂಥ ವೃಕ್ಷ ಜಾತಿಗಳು ಕೆಲವೇ ಉಳಿದಿದ್ದು ಬಹಳ ನಾಶಹೊಂದಿವೆ, ಗ್ರಾಮ ಅರಣ್ಯ ಸಮಿತಿಗಳ ಮೂಲಕ ಅರಣ್ಯ ನಿರ್ವಹಣೆಯಲ್ಲಿ ಜನತೆ ಪಾಲ್ಗೊಳ್ಳಬೇಕು.
 • ದಾಲ್ಚಿನ್ನಿ, ಹಾಲ್ಮಡ್ಡಿ, ಜೇನು, ಉಪ್ಪಾಗೆ, ಮುರುಗಲು, ಬಿದಿರು, ಬೆತ್ತ ಮುಂತಾದ ಅರಣ್ಯ ಉಪ ಉತ್ಪನ್ನಗಳನ್ನು ಹಾನಿಕಾರಕ ರೀತಿಯಲ್ಲಿ ಸಂಗ್ರಹಮಾಡುವ ಗುತ್ತಿಗೆ ನೀಡುವ ಪದ್ಧತಿಗಳನ್ನು ಕೈಬಿಡಬೇಕು. ಸ್ಥಾನಿಕ ಜನರಿಗೆ ಸುಸ್ಥಿರ ಉಪ ಅರಣ್ಯ ಉತ್ಪತ್ತಿ ಸಂಗ್ರಹ ಜವಾಬ್ದಾರಿ ನೀಡಬೇಕು.
 • ಅರಣ್ಯ ಉತ್ಪನ್ನ ಸಂಗ್ರಹ ಅವೈಜ್ಞಾನಿಕವಾಗಿದೆ : ವಿನಾಶಕಾರೀ ಸಂಗ್ರಹ ಪದ್ಧತಿ ಕೈಬಿಡಬೇಕು, ಅಪರೂಪದ ವಿನಾಶದ ಅಂಚಿನ ಔಷಧೀ ಮೂಲಿಕೆಗಳ ಸಂಗ್ರಹ ನಿಲ್ಲಿಸಬೇಕು. ಹರಾಜು ಪದ್ಧತಿ ಕೈಬಿಡಬೇಕು. ಸುಸ್ಥಿರವಾದ ಸಂಗ್ರಹಕ್ಕೆ ಸಮಗ್ರ ಯೋಜನೆಯನ್ನು ವರ್‍ಕಿಂಗ್ ಪ್ಲ್ಯಾನ್‌ನಲ್ಲಿ ಸೇರಿಸಬೇಕು.
 • ಬೇಟೆ ಮತ್ತು ಅತಿಕ್ರಮಣ, ಮರಗಳ್ಳತನ ತಡೆಗೆ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ವಿಶೇಷ ಗಮನ, ಕ್ರಮಬೇಕು.
 • ಶರಾವತಿ ಅಭಯಾರಣ್ಯ, ಶೆಟ್ಟಿಹಳ್ಳಿ ಹಾಗೂ ಗುಡವಿ ಪಕ್ಷಿಧಾಮದಲ್ಲಿ ಸ್ಥಾನಿಕ ವನವಾಸಿ ರೈತರ ಪರಿಸರ ಅಭಿವೃದ್ಧಿ ಸಮಿತಿ ರಚಿಸಿ ಅವರ ಸಹಕಾರ ಪಡೆಯಬೇಕು.
 • ಪರಿಹಾರ ಹೆಚ್ಚಿಸಿ : ಮಾನವ ವನ್ಯ ಜೀವಿ ಸಂಘರ್ಷ ಶಿವಮೊಗ್ಗಾ ಜಿಲ್ಲೆಯ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಮಿತಿಮೀರಿದೆ. ರೈತರ ಪ್ರಾಣ ಹಾಗೂ ಬೆಳೆ ರಕ್ಷಣೆ ದೊಡ್ಡ ಸಮಸ್ಯೆ ಎನಿಸಿದೆ. ಅದೆ ಹೊತ್ತಿಗೆ ವನ್ಯ ಜೀವಿಗಳ ರಕ್ಷಣೆ, ಪರಿಹಾರ, ಸೌರಬೇಲಿ ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕ್ರಮ ಇವೆಲ್ಲ ಜರೂರಾಗಿದೆ.
 • ಏಕಜಾತಿ ನಡುತೋಪು ಬೇಡ : ಶಿವಮೊಗ್ಗಾ ಜಿಲ್ಲೆಯಲ್ಲಿ ಏಕಜಾತಿ ಕೈಗಾರಿಕಾ ನೆಡು ತೋಪುಗಳು ಮಲೆನಾಡಿನ ಸ್ವಾಭಾವಿಕ ಜೀವ ವೈವಿಧ್ಯ, ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗಿದೆ. ಕೊಡಚಾದ್ರಿ, ಮಡೆನೂರು ಗಳಲ್ಲಿ ಹುಲ್ಲುಗಾವಲು  ಇರುವ ಪ್ರದೇಶಗಳಲ್ಲಿ ನೆಡುತೋಪುಗಳು ಬಂದಿದೆ. ಜಾನುವಾರಿಗೆ ಸಹಾ ಮೇಯಲು ಹುಲ್ಲುಗಾವಲು ಇಲ್ಲ.
 • ಬಯಲು ಭೂಮಿಯಲ್ಲಿ ಮಾತ್ರ ಮೈಸೂರು ಕಾಗದ ಕಾರ್ಖಾನೆಗೆ ನೆಡುತೋಪು ಬೆಳೆಸಲು ಅವಕಾಶ ನೀಡಬೇಕು.
 • ಕೈಗಾರಿಕಾ ನೆಡುತೋಪು ನಿರ್‍ಮಾಣದಲ್ಲಿ ಬೆಂಕಿಹಾಕಿ ಸುಡುವುದು, ಬುಲ್ಡೋಜರ್ ಬಳಕೆ ನಿಲ್ಲಿಸಬೇಕು. ಜೀವ ವೈವಿಧ್ಯ ನಾಶ, ಮಣ್ಣು ಸವಕಳಿ ತಡೆಗೆ ಈ ಕ್ರಮ ಅವಶ್ಯ.
 • ಕಾಡಿನ ಬೆಂಕಿ ಹೆಚ್ಚಾಗಲು ದಟ್ಟಾರಣ್ಯ ನಾಶವಾಗಿ ಕುರುಚಲು ಅರಣ್ಯವಾಗಿದ್ದು ಕಾರಣ, ಅತಿಯಾದ ಮಾನವ ಹಸ್ತಕ್ಷೇಪವೇ ಇದಕ್ಕೆ ಕಾರಣ. ಕಾಡಿನ ಬೆಂಕಿಯಿಂದ ದೊಡ್ಡ ಮರಗಳಿಗೆ ಅನಾಹುತ ಆಗದಿದ್ದರೂ ಬಳ್ಳಿ, ಗಿಡಗಂಟಿ, ಚಿಕ್ಕ ಸಸ್ಯ ಸಮೂಹಗಳು, ಔಷಧೀ ಸಸ್ಯಗಳು ಪೂರ್ಣ ಸುಟ್ಟು ಹೋಗುತ್ತವೆ. ಶಿವಮೊಗ್ಗಾ ಜಿಲ್ಲೆಯ ಹಳ್ಳಿಗಳ ಅಂಚಿನ ಕಾಡುಗಳನ್ನು ಬೆಂಕಿಯಿಂದ ಸಂರಕ್ಷಣೆ ಮಾಡಲು ಜನರ ಸಹಕಾರ ಅತಿ ಮುಖ್ಯವಾಗಿದೆ.
 • ಶಿವಮೊಗ್ಗಾ ಜಿಲ್ಲೆಯಲ್ಲಿ ವ್ಯಾಪಕ ಅರಣ್ಯ ನಾಶವಾಗಿದ್ದರಿಂದ ಕ್ಯಾಸನೂರು ಅರಣ್ಯ ಕಾಯಿಲೆಗಳಂಥ ರೋಗಗಳು ಬಂದಿವೆ.
 • ಬದಲಿ ಇಂಧನಕ್ಕೆ ಬೆಂಬಲ ನೀಡಿ : ಮಲೆನಾಡಿನ ಜನತೆ ಇಂಧನಕ್ಕಾಗಿ ಕಾಡಿನ ಮೇಲೆ ಅವಲಂಬಿಸುವದು ತಪ್ಪಬೇಕು. ಅದಕ್ಕಾಗಿ ಬಯೋಗ್ಯಾಸ್. ಸೌರಶಕ್ತಿ, ಸರಳ ಒಲೆ ಮುಂತಾದ ಸುಧಾರಿತ ಇಂಧನ ಪದ್ಧತಿ ಅಳವಡಿಕೆಗೆ ಈಗ ಪಶ್ಚಿಮಘಟ್ಟ ಕಾರ್‍ಯಪಡೆ, ಅರಣ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಕೈಗೊಂಡ ಯೋಜನೆಗಳಿಗೆ ಎಲ್ಲಿಲ್ಲದ ಮಹತ್ವ ನೀಡಬೇಕು.
 • ಅಕ್ರಮ ಮರಳುಗಾರಿಕೆ ನಿಲ್ಲಿಸಿ : ಅಕ್ರಮ ಕ್ವಾರಿಗಳು ಹಾಗೂ ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ಅರಣ್ಯ. ನದೀ ಪಾತ್ರಗಳು ಶಿವಮೊಗ್ಗಾ ಜಿಲ್ಲೆಯಲ್ಲಿ ಬಹು ಶೋಷಣೆಗೆ ಒಳಗಾಗುತ್ತವೆ. ನಾಶವಾಗುತ್ತವೆ.
 • ಕೆರೆಗಳ ರಕ್ಷಣೆ : ಜಿಲ್ಲೆಯಲ್ಲಿ ೧೬೪೩ ಕೆರೆಗಳಿವೆ ಚಿಕ್ಕ ಚಿಕ್ಕ ಮಲೆನಾಡ ಕೆರೆಗಳ ರಕ್ಷಣೆ-ಅಭಿವೃದ್ಧಿ ಅವಶ್ಯ. ಕೃಷಿಗೆ ಮತ್ತು ಕುಡಿಯುವ ನೀರಿಗೆ ಈ ಕೆರೆಗಳ ಉಳಿವು ಮುಖ್ಯ.
 • . ಹಳ್ಳ-ತೊರೆಗಳನ್ನು ಕಾಡಿನಿಂದ ತಿರುಗಿಸುವುದು, ನೀರಾವರಿಗೆ ಉಪಯೋಗಿಸುವದು ಇತ್ಯಾದಿಗಳಿಂದ ಸದಾ ಹರಿಯುವ ಹಳ್ಳಗಳು ಬತ್ತಲು ಕಾರಣವಾಗುತ್ತವೆ. ನದೀ ಪಾತ್ರದ ಅರಣ್ಯ ಕುಂಠಿತವಾಗುತ್ತದೆ.
 • ಸ್ಥಾನೀಯ ತಳಿ ರಕ್ಷಿಸಿ : ಶರಾವತಿ ನದೀ ಕಣಿವೆ ಕಾಡಿನ ಹಣ್ಣು ಜಾತಿಯ ತಳಿಗಳ ಬೃಹತ್ ಸಂಗ್ರಹಾಲಯವಾಗಿದೆ. ಮಾವು, ಹಲಸು, ಅಪ್ಪೇಮಿಡಿ, ಮೆಣಸು, ಮುರುಗಲು, ದಾಲ್ಚಿನ್ನಿ, ಲವಂಗ, ಶುಂಠಿ ಅರಿಶಿಣ ಮುಂತಾದ ಅಪರೂಪದ ಸಾಂಪ್ರದಾಯಿಕ ತಳಿಗಳ ಉಳಿವಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು.
 • ಜಾನುವಾರು ತಳಿ ಉಳಿಸಿ : ಶಿವಮೊಗ್ಗಾ ಜಿಲ್ಲೆಯಲ್ಲಿ ಹೆಚ್ಚಿರುವ ಮಲೆನಾಡು ಗಿಡ್ಡದಂಥ ದೇಶೀ ಪಶ್ಚಿಮ ಘಟ್ಟದ ಜಾನುವಾರು ತಳಿಗಳ ರಕ್ಷಣೆಗೆ ಇನ್ನಷ್ಟು ಕ್ರಿಯಾಶೀಲ ಕ್ರಮಬೇಕು.
 • ಅತಿ ರಾಸಾಯನಿಕ ಬಳಕೆ ನಿಲ್ಲಿಸಿ : ಶಿವಮೊಗ್ಗಾ ಜಿಲ್ಲೆಯಲ್ಲಿ ಅತಿಯಾದ ಹೈಬ್ರೀಡ ಜಾತಿಯ ಬೀಜ ಬಳಸುವಿಕೆ, ಕೃಷಿ, ತೋಟಗಾರಿಕೆಗಾಗಿ ಬಹಳ ರಾಸಾಯನಿಕ ಔಷಧಿ ಸಿಂಪಡಣೆ ಇತ್ಯಾದಿಗಳಿಂದ ದೇಶೀ ಕೃಷಿ ತೋಟಗಾರಿಕಾ ತಳಿಗಳು ಕಣ್ಮರೆ ಆಗುತ್ತಿವೆ. ಉದಾ: ಅತಿಯಾದ ಶುಂಠಿ, ಹತ್ತಿ ಬೆಳೆಗಳು ಬಂದಿದ್ದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಳ್ಳ, ಕೆರೆ, ಹೊಳೆಗಳಿಗೆ ರಾಸಾಯನಿಕಗಳು ಹೆಚ್ಚು ಹೆಚ್ಚು ಸೇರ್‍ಪಡೆ ಆಗುತ್ತಿವೆ. ಮನುಷ್ಯ, ಜಾನುವಾರು, ಜೇನು, ವನ್ಯಜೀವಿ, ಸಸ್ಯ ಸಂಪತ್ತಿನ ಮೇಲೂ ಇವುಗಳ ದುಷ್ಪರಿಣಾಮ ಗೋಚರಿಸುತ್ತಿದೆ. ಇನ್ನಷ್ಟು ಅಧ್ಯಯನ, ಮೌಲ್ಯಮಾಪನಗಳ ಅವಶ್ಯಕತೆ ಇದೆ. ಸಾವಯವ ಕೃಷಿಯ ಅಗತ್ಯತೆ ಇನ್ನಷ್ಟು ಹೆಚ್ಚಿದೆ.
 • ಕಾನು ಅರಣ್ಯ ರಕ್ಷಣಾಯೋಜನೆ : ಕಾನು ಅರಣ್ಯಗಳು ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ನಿತ್ಯಹರಿದ್ವರ್ಣ ಕಾನುಗಳಾಗಿದ್ದವು. ಆಯಾ ಗ್ರಾಮದ ನಿತ್ಯದ ಅವಶ್ಯಕತೆ ಪೂರೈಸುತ್ತಿದ್ದವು. ನಿರ್ವಹಣೆ ಅಲ್ಲಿನ ಜನರದ್ದೇ ಆಗಿತ್ತು. ಶಿವಮೊಗ್ಗಾ ಜಿಲ್ಲೆ ಸೊರಬದಲ್ಲಿ, ಸಾಗರ, ತೀರ್ಥಹಳ್ಳಿಗಳಲ್ಲಿ ಕಾನುಗಳನ್ನು ಬೇರೆ ಬೇರೆ ಹೆಸರಲ್ಲಿ ಕರೆದರೂ ಇವೆಲ್ಲ ಬಹುತೇಕ ರೆವೆನ್ಯೂ ಇಲಾಖೆಗೆ ಒಳಪಡುತ್ತವೆ. ಇತ್ತೀಚೆಗೆ ಜನರ ಸಹಭಾಗಿತ್ವದಲ್ಲಿ ದೇವರ ಕಾನು ರಕ್ಷಣಾ ಯೋಜನೆಯನ್ನು ಅರಣ್ಯ ಇಲಾಖೆ ಪಶ್ಚಿಮಘಟ್ಟ ಕಾರ್‍ಯಪಡೆ ಜಾರಿ ಮಾಡಿದೆ. ಇದು ೧೨೦೦೦ ಎಕರೆ ಕಾನು ಅರಣ್ಯ ಉಳಿಸಲು ಸಹಾಯವಾಗಿದೆ.
 • ಇನ್ನೂ ಸುಮಾರು ೮೦೦೦೦ ಎಕರೆ ಕಾನು ಅರಣ್ಯಗಳ ರಕ್ಷಣೆಗೆ ಜನರ ಸಹಭಾಗಿತ್ವದ ಯೋಜನೆ ರೂಪಿಸಬೇಕು. ಜಲಮೂಲ ರಕ್ಷಣೆ, ಕಟ್ಟಿಗೆ, ಅರಣ್ಯ, ಔಷಧೀ ಮಾಲಿಕೆ, ರೈತರ ಕುಡಿಯುವ ನೀರಿನ ಮೂಲ ರಕ್ಷಣೆಗೆ ಕಾನುಗಳ ಉಳಿವು ಅತ್ಯವಶ್ಯ.

ಅರಣ್ಯ ಅತಿಕ್ರಮಣ ಶಿವಮೊಗ್ಗಾ ಜಿಲ್ಲೆಯಲ್ಲಿ ಒಟ್ಟೂ ೩೬೧೦೨ ಹೆಕ್ಟೇರ್ ಇದೆ. ಅರಣ್ಯ ಅತಿಕಮಣ ಪ್ರಮಾಣ ಬಹಳೇ ಜಾಸ್ತಿ ಇದೆ. ಇದರಿಂದಾಗುವ ಗಂಭೀರ ಪಾರಿಸಾರಿಕ ಪರಿಣಾಮಗಳು.: ಅರಣ್ಯ ಪ್ರದೇಶ ಕಡಿಮೆ ಆಗಿದೆ, ಅರಣ್ಯ ಛಿದ್ರವಾಗಿದೆ, ಜೀವವೈವಿಧ್ಯತೆ ಕಡಿಮೆ ಆಗಿದೆ. ಸಸ್ಯ ಸಾಂದ್ರತೆ ಕಡಿಮೆ ಆಗಿದೆ, ಅರಣ್ಯ ಸ್ವರೂಪದಲ್ಲೇ ಬದಲಾವಣೆ ಆಗಿದೆ, ನೈಸರ್ಗಿಕ ಪುನರುತ್ಪತ್ತಿ ಕುಂಠಿತ ಆಗಿದೆ, ಹೊರಗಿನ ಸಸ್ಯಕಳೆಗಳು ತುಂಬಿಕೊಳ್ಳುತ್ತವೆ, ವನ್ಯ ಜೀವಿಗಳು ಅತಂತ್ರವಾಗುತ್ತವೆ. ಸಸ್ಯಜಾತಿ/ ಪ್ರಭೇದಗಳು ಕಾಣೆಯಾಗಿವೆ, ಅರಣ್ಯದಿಂದ ಬರುವ ಉತ್ಪನ್ನ ಕಡಿಮೆ ಆಗಿದೆ. ಅರಣ್ಯದ ಆರ್ಥಿಕ ಆದಾಯ ಕಡಿಮೆ ಆಗಿದೆ. ಜಲಮೂಲ, ಜಲಾನಯನಕ್ಕೆ ಬಹಳ ಹೊಡೆತ ಬಿದ್ದಿದೆ. ಅರಣ್ಯ ನಿರ್ವಹಣೆ ವೆಚ್ಚ ಅಧಿಕವಾಗುತ್ತದೆ.

ಶ್ರೀ ಅನಂತ ಹೆಗಡೆ ಅಶೀಸರ
ಹಾಗೂ ಪಶ್ಷಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರು,
ಮಾಜಿ ಉಪಾಧ್ಯಕ್ಷರು ರಾಜ್ಯ ಔಷಧೀ ಮೂಲಿಕಾ ಪ್ರಾಧಿಕಾರ
ಮಾಜಿ ಉಪಾಧ್ಯಕ್ಷರು, ರಾಜ್ಯ ಜೀವ ವೈವಿದ್ಯ ಮಂಡಳಿ
ನಿಕಟಪೂರ್ವ ಉಪಾಧ್ಯಕ್ಷರು ರಾಜ್ಯ ವನ್ಯಜೀವಿ ಮಂಡಳಿ

————————————————

Disclaimer: The views expressed here are of the author and not of KSPCB. The article is published only in the interest of a public understanding of the issues involving Climate Change and should not be construed as the policy guidelines of KSPCB.

Advertisements